ಅಗ್ರ ಇದ್ಧಿ ಸೇನಾನಿ ಮಹಾಮೊಗ್ಗಲಾನ
1. ಜನ್ಮದಿಂದ ಸತ್ಯಶೋಧನೆಯವರೆಗೆ
1.1 ಮಹಾಮೊಗ್ಗಲಾನರರ ಜನ್ಮ
ರಾಜಗೃಹದ ಸಮೀಪ ಉಪತಿಸ್ಸ ಹಾಗು ಕೋಲಿತ ಎಂಬ ಎರಡು ಹಳ್ಳಿಗಳಿದ್ದವು. ಉಪತಿಸ್ಸ ಹಳ್ಳಿಯಲ್ಲಿ ರೂಪಸಾರಿ ಎಂಬ ಬ್ರಾಹ್ಮಣ ಯುವತಿಯಿದ್ದಳು. ಆಕೆಗೆ ವಂಗತನೆಂಬ ಪ್ರಭಾವಶಾಲಿ ಶ್ರೀಮಂತ ಬ್ರಾಹ್ಮಣನೊಂದಿಗೆ ವಿವಾಹವಾಯಿತು. ಕಾಲನಂತರ ಆಕೆಗೆ ಏಳು ಮಕ್ಕಳಾದವು. ಅವರಲ್ಲಿ ಹಿರಿಯವನಿಗೆ ಆ ಊರಿನ ಹೆಸರೇ ಆಗಿದ್ದ ಉಪತಿಸ್ಸನೆಂದು ಇಡಲಾಯಿತು. ಹಾಗೆಯೇ ಸಾರಿಯ ಪುತ್ರನಾಗಿದ್ದ ಕಾರಣ ಆತನಿಗೆ ಸಾರಿಪುತ್ರನೆಂದು ಅಥವಾ ಶಾರಿಪುತ್ತನೆಂದು ಕರೆಯುತ್ತಿದ್ದರು. ಮಾಗಧಿ ಭಾಷೆಯಲ್ಲಿ ಶಾರಿಪುತ್ರವು ಸಾರಿಪುತ್ತನೆಂದು ಬಳಕೆಯಲ್ಲಿತ್ತು. ಆತನಿಗೆ ಉಳಿದ ಮೂವರು ಸೋದರರಿದ್ದರು. ಅವರೆಂದರೆ ಉಪಸೇನ, ಚುಂದ ಮತ್ತು ರೇವತ. ಹಾಗೆಯೇ ಆತನಿಗೆ ಮೂವರು ಸೋದರಿಯರು ಇದ್ದರು. ಅವರೆಂದರೆ: ಚಾಲ, ಉಪಚಾಲ ಮತ್ತು ಸಿಸುಪಚಾಲ.
ಉಪತಿಸ್ಸ ಹಳ್ಳಿಯ ಪಕ್ಕದಲ್ಲಿದ್ದ ಹಳ್ಳಿಯಾದ ಕೋಲಿತ ಎಂಬ ಹಳ್ಳಿಯಲ್ಲಿ ಇನ್ನೊಬ್ಬ ಬ್ರಾಹ್ಮಣ ಸ್ತ್ರೀಯಾದ ಮೊಗ್ಗಲಿಗೆ ಸಹಾ ಸಾರಿಪುತ್ತ ಜನಿಸಿದ ದಿನವೇ ಪುತ್ರರತ್ನವೊಂದು ಜನಿಸಿತು. ಆ ಮಗುವಿಗೆ ಆ ಊರಿನ ಹೆಸರಾದ ಕೋಲಿತನೆಂದು ಹಾಗೆಯೇ ಮೊಗ್ಗಲಿಯ ಮಗನಾದ ಕಾರಣ ಆತನಿಗೆ ಮೊಗ್ಗಲಿಪುತ್ರನೆಂದು ಮೊಗ್ಗಲಾನನೆಂದು ಅಥವಾ ಮೊಗ್ಗಲಿಪುತ್ತನೆಂದು ಕರೆಯಲಾಗುತ್ತಿತ್ತು. ಮೊಗ್ಗಲಾನರು ನೋಡಲು ನೀಲ ಕಮಲದ ವರ್ಣದವರು ಅಥವಾ ವರ್ಷಮೋಡದ ವರ್ಣದವರು ಎಂದು ಹೇಳುವರು ಸಾರಿ ಹಾಗು ಮೊಗ್ಗಲಿಯ ಕುಟುಂಬಗಳು ಏಳು ತಲೆಮಾರಿನಿಂದ ಸ್ನೇಹದಿಂದಿದ್ದವು. ಹೀಗಾಗಿ ಸಾರಿಪುತ್ತ ಹಾಗು ಮೊಗ್ಗಲಾನ ಈರ್ವರು ಬಾಲ್ಯದಿಂದಲೂ ಉತ್ತಮ ಮಿತ್ರರಾಗಿದ್ದರು. ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದರು. ಆ ಕಾಲದ ಸರ್ವಶಾಸ್ತ್ರಗಳಲ್ಲಿ ಪಾರಂಗತರಾದರು. ಅವರಿಬ್ಬರಿಗೂ 500 ಜನ ಸಹ ಬ್ರಾಹ್ಮಣ ಯುವಕರ ಹಿಂಬಾಲಕತನವಿತ್ತು. ಅವರಲ್ಲಿ ಸಂಕೋಚತನದ ಬುದ್ಧಿಯಿರಲಿಲ್ಲ. ಹೃದಯ ವೈಶಾಲ್ಯದ ಜೊತೆಗೆ ವಿಶಾಲ ಮನೋಭಾವವಿತ್ತು. ಯಾವರೀತಿಯ ಗರ್ವವಿರಲಿಲ್ಲ. ವಿಧೇಯತೆ, ಸತ್ಯದೆಡೆಗೆ ಒಲವು ಇತ್ಯಾದಿ ಸದ್ಗುಣಗಳ ನಿಧಿಯನ್ನೇ ಅವರು ಹೊಂದಿದ್ದರು.
1.2 ಬೆಟ್ಟದ ಮೇಲಿನ ಹಬ್ಬಾಚರಣೆಯ ಪರಿಣಾಮ
ಆ ಕಾಲದಲ್ಲಿ ರಾಜಗೃಹದ ಬೆಟ್ಟದ ಮೇಲೆ ವಾಷರ್ಿಕವಾಗಿ ಹಬ್ಬವನ್ನು (ಗಿರಗ್ಗ ಸಮಜ್ಜ) ಆಚರಿಸಲಾಗುತ್ತಿತ್ತು. ಇವರೀರ್ವರಿಗೆ ವಿಶೇಷ ಸೌಲಭ್ಯವನ್ನು ಮೀಸಲಾಗಿಡುತ್ತಿತ್ತು. ಆ ವಾಷರ್ಿಕ ಜಾತ್ರೆಯ ಉತ್ಸವದಲ್ಲಿ ಸರ್ವರೂ ಅತ್ಯಂತ ಸಂತೋಷ, ಸಂಭ್ರಮ, ಮೋದಗಳಲ್ಲಿ ಮುಳುಗಿಹೋಗುತ್ತಿದ್ದರು. ಸಾರಿಪುತ್ತ ಹಾಗು ಮೊಗ್ಗಲಾನರವರು ಬಾಲ್ಯದಿಂದಲೇ ತುಸು ವೈರಾಗ್ಯ ಸ್ವಭಾವ ಹೊಂದ್ದಿದ ಕಾರಣ ಅವರು ಮೂರನೆಯ ದಿನದ ಹಬ್ಬದ ಉತ್ಸವಕ್ಕೆ ಆನಂದಹೀನರಾದರು. ಅವರಿಗೆ ಆ ಸುಖಭೋಗಗಳಲ್ಲಿ ಆನಂದಿಸಲು ಆಗಲಿಲ್ಲ. ಸಾರಿಪುತ್ತ ಈ ರೀತಿಯ ಉದ್ಗಾರವನ್ನು ತೆಗೆದರು: ಇಲ್ಲಿ ನೋಡಲು ಅಂತಹದ್ದೇನಿದೆ? ಇದೆಲ್ಲವೂ ಅಲ್ಪಮತಿಗಳ ಆನಂದವಾಗಿದೆ, ಜನರು ನೂರು ತುಂಬುವುದರೊಳಗೆ ಸಾಯುವರು, ಇಲ್ಲಿ ನೋಡಲು ಅರ್ಹವಾಗಿರುವುದು ಏನೂ ಕಾಣುತ್ತಿಲ್ಲ, ಇದರಿಂದ ಪ್ರಯೋಜನವಾದರೂ ಏನೂ ? ಹಲವು ವರ್ಷಗಳ ನಂತರ ಈ ನಟರು ಸಹಾ ಮುದುಕರಾಗುವರು, ಬಲಹೀನರಾಗುವರು, ಈ ನಟರೇ ತಮ್ಮ ಸಮಸ್ಯೆಗಳನ್ನು ಬಗೆಹರಿದುಕೊಂಡಿಲ್ಲ ಇನ್ನು ನಮಗೆ ಏನು ಸಹಾಯ ಮಾಡುವರು? ನಾವು ಇಲ್ಲಿ ನಮ್ಮ ಸಮಯವನ್ನು ವ್ಯರ್ಥಗೊಳಿಸುತಿಹೆವು, ನಮ್ಮ ಅಭಿರುಚಿ ಶ್ರೇಷ್ಠದ್ದಾಗಿರಬೇಕು, ನಮ್ಮ ಹುಡುಕಾಟ ಪರಮ ಉತ್ಕೃಷ್ಟವಾಗಬೇಕು. ಈ ಅನಿತ್ಯಕರ ಕಣ್ಣು ಹಾಗೂ ಕಿವಿಯ ಸುಖಗಳಿಗಿಂತ ಪರಮ ಶ್ರೇಷ್ಟವಾಗಿರುವುದನ್ನು ಹುಡುಕಬೇಕು .ಇವೆಲ್ಲದರಿಂದ ಮುಕ್ತಿ ಸಿಗುವಂತಹ ಬೋಧನೆಯನ್ನು ನಾವು ಅನ್ವೇಷಿಸಬಾರದೇಕೆ? ಜನ್ಮಗಳಿಂದ ಪಾರಾಗಬಾರದೇಕೆ? ಇದನ್ನು ಆಲಿಸಿದ ಮೊಗ್ಗಲ್ಲಾನರು ಸಹಾ ತಮ್ಮ ಅಭಿಪ್ರಾಯ ಹೀಗೆಯೇ ಇರುವುದೆಂದು ತಿಳಿಸಿದರು. ಆಗ ಸಾರಿಪುತ್ತರು ಹೀಗೆ ಹೇಳಿದರು: ಹಾಗಾದರೆ ನಮ್ಮಿಬ್ಬರ ಚಿಂತನೆಯು ಒಂದೇ ಬಗೆಯದಾಗಿದೆ. ಆದರೆ ವಿಮುಕ್ತಿಯ ಅನ್ವೇಷಕರು ಗೃಹದಲ್ಲಿದ್ದು ಸಾಧಿಸಲಾಗುವುದಿಲ್ಲ. ಹೀಗಾಗಿ ನಾವು ಯಾರಾದರೂ ಉತ್ತಮರಾಗಿರುವ ತಾಪಸಿಕರ ಬಳಿಯಲ್ಲಿ ಉನ್ನತ ಜೀವನವನ್ನು ನಡೆಸೋಣ ಎಂದು ನಿರ್ಧರಿಸಿದರು.
1.3 ಸಂಜಯ ಪರಿಬ್ಬಾಜಕನ ಬಳಿ ಪ್ರವಜ್ರ್ಯ
ಆ ಸಮಯದಲ್ಲಿ ರಾಜಗೃಹದಲ್ಲಿ ಸಂಜಯನೆಂಬ ಪರಿವ್ರಾಜಕನಿದ್ದನು. ಆತನ ಅಧೀನದಲ್ಲಿ ಹೇರಳವಾದ ಶಿಷ್ಯ ಸಮೂಹವಿತ್ತು. ಸಾರಿಪುತ್ತ ಹಾಗು ಮೊಗ್ಗಲಾನರು ತಮ್ಮ ಸಾವಿರ ಅನುಯಾಯಿ ಸ್ನೇಹಿತರನ್ನು ಒಗ್ಗೂಡಿಕೊಂಡು ಸಂಜಯನ ಬಳಿಗೆ ಸಮೀಪಿಸಿದರು. ಆ ಸಮಯದಲ್ಲಿ ಅವರು ಬ್ರಾಹ್ಮಣತ್ವದ ಸಂಕೇತವಾದ ಜನಿವಾರಗಳೆಲ್ಲವನ್ನು ಗಡ್ಡ ಮೀಸೆಗಳನ್ನು ತಗೆದುಹಾಕಿ ಆತನಿಂದ ದೀಕ್ಷೆ ಪಡೆದರು. ಅದೇ ಸಮಯದಲ್ಲಿ ಸಿದ್ಧಾರ್ಥ ಗೋತಮರು ಕಪಿಲವಸ್ತುವಿನಲ್ಲಿ ವಿವಾಹವಾಗುತ್ತಿದ್ದರು. ಹೀಗಾಗಿ ಸಂಜಯನ ಖ್ಯಾತಿಯು ಸಹಾ ನೂರ್ಮಡಿಯಾಗಿ ಹಿಗ್ಗಿತು. ಅತಿ ಅಲ್ಪಕಾಲದಲ್ಲೇ ಅವರು ಸಂಜಯನ ಬಳಿಯಲ್ಲಿ ಆತನ ಇಡೀ ಸಿದ್ಧಾಂತವನ್ನು ಜೀಣರ್ಿಸಿಕೊಂಡರು.
ಸಂಜಯನ ಸಿದ್ಧಾಂತ : ನನಗೆ ಪರಲೋಕವಿದೆಯೇ? ಎಂದು ಪ್ರಶ್ನಿಸಿದರೆ ಇದೆ ಎಂದು ಹೇಳುವೆನು. ಆದರೆ ಅದನ್ನು ಒಪ್ಪುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಹಾಗೆಯೇ ಪರಲೋಕವೂ ಇಲ್ಲವೇ? ಎಂದು ಪ್ರಶ್ನಿಸಿದರೆ ಇಲ್ಲ ಎಂದು ಹೇಳುವೆನು. ಆದರೆ ಅದನ್ನೇ ಒಪ್ಪಲಾರೆ, ನಿರಾಕರಿಸಲಾರೆ. ಹಾಗೆಯೇ ಪರಲೋಕವು ಇದ್ದು ಇಲ್ಲವೇ? ಎಂದು ಪ್ರಶ್ನಿಸಿದರೆ ಹಾಗೆಯೇ ಹೇಳುವೆನು. ಆದರೆ ಅದನ್ನು ಒಪ್ಪಲಾರೆ, ನಿರಾಕರಿಸಲಾರೆ. ಇದೇ ರೀತಿಯಲ್ಲಿ ಜೀವಿಗಳ ಆದಿಯ ಬಗ್ಗೆಯಾಗಲೀ, ಯಾವುದೇ ವಿಷಯದ ಬಗ್ಗೆಯಾಗಲಿ ನನ್ನನ್ನು ಕೇಳಿದಾಗ ಹಾಗೆಯೇ ಹೇಳುವೆನು. ಆದರೆ ಅದನ್ನೇ ಒಪ್ಪಲಾರೆ, ಹಾಗೆಯೇ ನಿರಾಕರಿಸಲಾರೆ ಎಂದು ಸಂಜಯನು ತನ್ನ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದನು.
ಆತನಿಂದ ಹೀಗೆ ನುಣುಚಿಕೊಳ್ಳುವ ಅಮರ ವಿಕ್ಷೇಪವಾದವನ್ನು ಸಾರಿಪುತ್ತ ಮೊಗ್ಗಲಾನರು ಕಲಿತರು. ನಂತರ ಇನ್ನೂ ಕಲಿಯಬೇಕಾದುದು ಇದೆಯೇ? ಎಂದು ಪ್ರಶ್ನಿಸಿದಾಗ ಇನ್ನೇನೂ ಇಲ್ಲ, ನೀವು ಪೂರ್ಣವಾಗಿ ಅರಿತಿರುವಿರಿ ಎಂದು ಸಂಜಯನು ಹೇಳುತ್ತಾನೆ.
ನಂತರ ಏಕಾಂತದಲ್ಲಿ ಸಾರಿಪುತ್ತರು ಮೊಗ್ಗಲಾನರಿಗೆ ಹೀಗೆ ನುಡಿಯುತ್ತಾರೆ: ಮಿತ್ರ ಈ ಸಂಜಯರ ಬಳಿಯಲ್ಲಿನ ವಿಕ್ಷೇಪವಾದದಿಂದ ನಾವು ಮುಕ್ತಿ ಹೊಂದಲಾರೆವು ಎನಿಸುತ್ತದೆ. ಇದರಿಂದಾಗಿ ನಾವು ನಮ್ಮ ಸಂಶಯಗಳನ್ನು ಸಹಾ ಪರಿಹರಿಸಿಕೊಂಡಿಲ್ಲ. ಇನ್ನು ಜನ್ಮವಿಮುಕ್ತಿ ದೂರದ ವಿಷಯವಾಗಿದೆ. ಭಾರತವು ಅತ್ಯಂತ ವಿಶಾಲವಾದ ದೇಶವಾಗಿದೆ, ಖಂಡಿತವಾಗಿ ನಮಗೆ ಜ್ಞಾನೋದಯ ಹೊಂದಿದ ಮಹನೀಯರು ಸಿಕ್ಕೇ ಸಿಗುವರು. ಹೀಗಾಗಿ ಇನ್ನು ಯಾರ ಬಳಿಯಲ್ಲೂ ದೀಕ್ಷೆ ಪಡೆಯದೆ, ಯಾರ್ಯಾರು ಜ್ಞಾನಿಗಳೆಂದು ಪರಿಗಣಿಸಲ್ಪಟ್ಟಿರುವರೋ ಅಥವಾ ಕಾಣುವರೋ ಅವರಲ್ಲಿ ಪ್ರಶ್ನಿಸಿ ಅವರ ಜ್ಞಾನವನ್ನು ಜಾಲಾಡಿಸೋಣ. ನಮ್ಮಲ್ಲಿ ಯಾರಿಗೆ ಆಗಲಿ, ಅಂತಹ ವ್ಯಕ್ತಿಯು ಸಿಕ್ಕಾಗ ಆತನ ಬಗ್ಗೆ ನಾವು ಪರಸ್ಪರ ಜ್ಞಾನವನ್ನು ಹಂಚಿಕೊಳ್ಳೋಣ.
ಹೌದು, ನಮ್ಮಲ್ಲಿ ಯಾರಿಗೆ ಆಗಲಿ, ಅಂತಹ ಜ್ಞಾನ ಅಥವಾ ಅಂತಹ ಜ್ಞಾನಿಯು ಸಿಕ್ಕಾಗ ಅದನ್ನು ಇನ್ನೊಬ್ಬರಿಗೆ ಕಡ್ಡಾಯವಾಗಿ ಹೇಳೋಣ. ಅಂತಹ ಸರ್ವಜ್ಞ ಸಂಪನ್ನರು ಸಿಕ್ಕಿದರೆ ಎಲ್ಲರನ್ನು ಅವರೆಡೆಗೆ ಸಾಗಿಸೋಣ ಹೀಗೆ ಸಾರಿಪುತ್ತ ಮತ್ತು ಮೊಗ್ಗಲಾನರಲ್ಲಿ ಒಪ್ಪಂದವಾಯಿತು.
ಇವರೀರ್ವರ ತ್ಯಾಗ ಕೇಳಿ ಕೆಲವು ಸ್ನೇಹಿತರು ಸಹಾ ಗೃಹತ್ಯಾಗ ಮಾಡಿ ಇವರೊಂದಿಗೆ ಕೂಡಿಕೊಂಡರು. ಆಗ ಆ ಸಮಯದಲ್ಲಿ ಜ್ಞಾನಿಯು ಹಾಗು ವಾಗ್ಮಿಯು ಆಗಿದ್ದಂತಹ ಸಂಜಯ ಸನ್ಯಾಸಿಯ ಬಳಿ ಶಿಷ್ಯರಾದರು. ಆದರೂ ಅವರಿಗೆ ಏನೋ ಕೊರತೆ ಕಾಡತೊಡಗಿತು. ಯೋಗ್ಯ ಗುರುವು ಸಿಗದ ಕಾರಣ, ಸಂಜಯನಲ್ಲಿಯೇ ಶಿಷ್ಯರಾಗಿದ್ದರು.
ಇಡೀ ಜಂಬುದ್ವೀಪದಲ್ಲಿ (ಭಾರತ) ಅಂತಹ ಸತ್ಯ ಸಾಕ್ಷಾತ್ಕರಿಸಿದಂತಹ ಶ್ರೇಷ್ಠ ಜ್ಞಾನಿಯ ಅನ್ವೇಷಣೆಯಲ್ಲಿ ಇವರು ತೊಡಗಿದರು. ಆದರೆ ಅವರು ಸಂದಶರ್ಿಸಿದಂತಹ ಯಾರಲ್ಲೂ ಸಹ, ಉನ್ನತಶೀಲವಾಗಲಿ, ಉನ್ನತ ಧ್ಯಾನವಾಗಲಿ, ಉನ್ನತ ಪ್ರಜ್ಞಾವಂತರಾಗಲಿ ಕಾಣಲಾಗಲಿಲ್ಲ. ಆದರೂ ಅವರ ಹುಡುಕಾಟವು ನಿಲ್ಲಲಿಲ್ಲ. ಭಾರತದ ಉದ್ದಗಲಕ್ಕೂ ಅವರು ಯೋಗ್ಯ ಗುರುವಿನ ಅನ್ವéೇಷಣೆಯಲ್ಲಿ ತೊಡಗಿದರು. ಬಹಳಷ್ಟು ಖ್ಯಾತಗುರುಗಳ ಸಂದಶರ್ಿಸಿದರೂ ಸಹಾ ಆ ಗುರುಗಳ ಜ್ಞಾನದ ಮಟ್ಟ ಅರಿವಾಗಿ ಅವರಿಗೆ ನಿರಾಸೆಯಾಯಿತು.
* * *
1.4 ರಾಜಗೃಹಕ್ಕೆ ಬುದ್ಧರ ಆಗಮನ
ಕಾಲಾನಂತರ ಸರಿಯಾಗಿ ಅವರಿಗೆ ನಲವತ್ತು ವರ್ಷ ವಯಸ್ಸು ಆದಾಗ ಅಂದರೆ ಅವರು ಗೃಹತ್ಯಾಗ ಮಾಡಿ ಸುಮಾರು 20 ವರ್ಷಗಳ ನಂತರ ಆ ಸಮಯದಲ್ಲಿ ಬುದ್ಧಭಗವಾನರು ಸಮ್ಮಾಸಂಬೋಧಿಪ್ರಾಪ್ತಿಯ ಬಳಿಕ ಪ್ರಥಮ ವಷರ್ಾವಾಸವನ್ನು ಕಳೆದು ರಾಜ ಬಿಂಬಸಾರನಿಗೆ ನೀಡಿದ ಮಾತಿನಂತೆ ರಾಜಗೃಹಕ್ಕೆ ಬಂದು ಅಲ್ಲಿ ಭೇಟಿನೀಡಿ ಧಮ್ಮ ಬೋಧಿಸಿದರು. ಆಗ ರಾಜನು ಪ್ರಸನ್ನನಾಗಿ ವೇಲುವನವನ್ನು ಭಿಕ್ಷುಸಂಘಕ್ಕೆ ದಾನವಾಗಿ ನೀಡಿದನು. ಆಗ ಭಗವಾನರು ಅಲ್ಲಿ ತಾತ್ಕಾಲಿಕವಾಗಿ ನೆಲೆಸಿದರು.
1.5 ಸವರ್ೆಂದ್ರಿಯ ಶಾಂತ ಅಸ್ಸಜಿಯ ದರ್ಶನ
ಭಗವಾನರು ಅರಹಂತರ ಸಂಖ್ಯೆಯು 60 ಮುಟ್ಟಿದೊಡನೆ ಬಹುಜನ ಹಿತಕ್ಕಾಗಿ ಬಹುಜನರ ಸುಖಕ್ಕಾಗಿ ಅರಹಂತರು ಸಂಚರಿಸಬೇಕೆಂದು ನುಡಿದರು. ಹೀಗಾಗಿ ಆ ಅರಹಂತರೆಲ್ಲರೂ ಸರ್ವರ ಹಿತಕ್ಕಾಗಿ ಸಂಚರಿಸಬೇಕೆಂದು ನುಡಿದರು. ಹೀಗಾಗಿ ಆ ಅರಹಂತರೆಲ್ಲರೂ ಸರ್ವರ ಹಿತಕ್ಕಾಗಿ ಸಂಚರಿಸುತ್ತಿದ್ದರು. ಈ 60 ಅರಹಂತರಲ್ಲಿ ಪಂಚವಗರ್ಿಯ ಭಿಕ್ಷುಗಳು ಇದ್ದರು. ಅವರು ಈ ಹಿಂದೆ ಬೋಧಿಸತ್ವ ಸೇವೆ ಮಾಡಿದ್ದರು. ನಂತರ ಧಮ್ಮಚಕ್ಕಪವತ್ತನ ಸುತ್ತ ಆಲಿಸಿ ಸೋತಪನ್ನರಾಗಿ ಅನಂತರ ಅನತ್ತಲಕ್ಖಣ ಸುತ್ತ ಆಲಿಸಿ ಅರಹಂತರಾಗಿದ್ದರು. ಇವರಲ್ಲಿ ಅಸ್ಸಜಿಯು ಸಹ ಒಬ್ಬರಾಗಿದ್ದರು.
ಆ ದಿನ ಮುಂಜಾನೆಯಲ್ಲಿ ಅಸ್ಸಜಿಯು ರಾಜಗೃಹದಲ್ಲಿ ಆಹಾರದ ಅನ್ವೇಷಣೆಯಲ್ಲಿ ಹೊರಟಿದ್ದರು. ಅವರ ಸರ್ವ ಇಂದ್ರಿಯಗಳು ಶಾಂತವಾಗಿ, ಅತ್ಯಂತ ಪ್ರಸನ್ನರಾಗಿ, ಅತ್ಯಂತ ನಿವರ್ಿಕಾರವಾಗಿ, ಯಾವುದೇ ಬಯಕೆಯಿಲ್ಲದವರು ಹೇಗೆ ಶಾಂತವಾಗಿ, ನಿಯಂತ್ರಿತವಾಗಿ ನಡೆಯುವರೋ ಹಾಗೆ ತೇಜೋಭರಿತರಾದ, ಶಾಂತರಾದ ಅವರನ್ನು ಸಾರಿಪುತ್ತರು ನೋಡಿದರು. ಅವರ ಹೃದಯವು ಆನಂದದಿಂದ ಅನಿಯಂತ್ರಿತವಾಗಿ ಉಕ್ಕಿತು. ತಕ್ಷಣ ಹೀಗೆ ಯೋಚಿಸಿದರು: ಈ ಬಗೆಯ ಪರಮ ಶಾಂತವಾಗಿರುವ ಭಿಕ್ಷುವನ್ನು ನಾನು ಈವರೆವಿಗೂ ಕಂಡಿರಲಿಲ್ಲ. ಖಂಡಿತವಾಗಿ ಈತನು ಮುಕ್ತಿ ಹೊಂದಿರುವ ಅರ್ಹತೆಯಿರುವವನೇ ಅನಿಸುತ್ತಿದೆ. ತಡಮಾಡದೆ ಕೂಡಲೇ ಪ್ರಶ್ನಿಸುವೆ. ಆದರೆ ತಕ್ಷಣ ಅವರಿಗೆ ಹೀಗೂ ಆಲೋಚನೆ ಉಂಟಾಯಿತು: ಇಲ್ಲ, ಈಗ ಊಟದ ಸಮಯ. ಊಟದ ನಂತರ ಪ್ರಶ್ನಿಸುವುದು ಒಳ್ಳೆಯದು ಎಂದು ನಿರ್ಧರಿಸಿದರು. ಹಾಗೆಯೇ ಹಿಂಬಾಲಿಸಿದರು. ಅಸ್ಸಜಿಯವರಿಗೆ ಆಹಾರ ದೊರೆಯಿತು. ಅವರು ಆಹಾರ ಸೇವಿಸುವ ಸ್ಥಳದ ಬಗ್ಗೆ ಗಮನಹರಿಸಿದಾಗ ಸಾರಿಪುತ್ತರು ಒಳ್ಳೆಯ ಸ್ಥಳ ಆಯ್ಕೆಮಾಡಿ ವಸ್ತ್ರದಿಂದ ಆಸನ ಸಿದ್ಧಪಡಿಸಿ, ನೀರನ್ನು ನೀಡಿದರು. ಶಿಷ್ಯನು ಹೇಗೆ ಗುರುವನ್ನು ಸತ್ಕರಿಸುವನೋ ಹಾಗೆಯೇ ಸತ್ಕಾರ ಮಾಡಿದರು. ಅವರು ಊಟ ಮುಗಿಸಿದರು. ನಂತರ ಈರ್ವರೂ ಕುಶಲ ಮಂಗಳಗಳನ್ನು ವಿನಿಯಮಯ ಮಾಡಿಕೊಂಡರು. ನಂತರ ಸಾರಿಪುತ್ತರು ಹೀಗೆ ನುಡಿದರು: ನಿಮ್ಮ ಭಾವಗಳು ಅತ್ಯಂತ ಪ್ರಶಾಂತವಾಗಿದೆ, ನಿಮ್ಮ ವರ್ಣವು ಸಹಾ ಪವಿತ್ರ ಹಾಗು ಪ್ರಕಾಶಮಾನವಾಗಿದೆ. ಯಾರಲ್ಲಿ ತಾವು ತಾಪಸಿಕರಾಗಿದ್ದೀರಿ? ತಮ್ಮ ಗುರು ಯಾರು? ಅವರು ಎಂತಹ ಸಿದ್ಧಾಂತವನ್ನು ಹೊಂದಿದ್ದಾರೆ?
ಅಸ್ಸಜಿಯವರು ಆಗ ಹೀಗೆ ನುಡಿಯುತ್ತಾರೆ: ಓ ಆಯುಷ್ಮಂತನೇ, ಶಾಕ್ಯವಂಶದಿಂದ ಸತ್ಯಶೋಧನೆಗೆಂದು ಗೃಹತೊರೆದು, ನಂತರ ಸಮ್ಯಕ್ ಸಂಬುದ್ಧರಾಗಿರುವ ಗೋತಮ ಬುದ್ಧರಲ್ಲಿಯೇ ನಾನು ಶರಣು ಹೋಗಿರುವೆನು. ಅಂತಹ ಭಗವಾನರೇ ನನ್ನ ಶಾಸ್ತರು, ಗುರುಗಳು. ಅವರಿಂದ ನುಡಿಯಲ್ಪಟ್ಟಿರುವ ಧಮ್ಮವನ್ನು ನಾನು ಹೊಂದಿರುವೆನು, ಪಾಲಿಸಿರುವೆನು.
ಅಂತಹ ಭಗವಾನರು ಬೋಧಿಸುವುದು ಏನನ್ನು? ಅವರ ಧರ್ಮವೇನು? ಅದನ್ನು ಆಲಿಸಿದ ಅಸ್ಸಜಿಯು ಹೀಗೆ ಯೋಚಿಸಿದರು: ಸಾಮಾನ್ಯವಾಗಿ ಈ ಪರಿಬ್ಬಾಜಕರು ಭಗವಾನರ ಬೋಧನೆಯನ್ನು ವಿರೋಧಿಸುವವರಾಗಿರುತ್ತಾರೆ. ನಾನು ಈತನಿಗೆ ಭಗವಾನರ ಧಮ್ಮವು ಎಷ್ಟು ಗಂಭೀರವಾದುದೆಂದು ತಿಳಿಯಪಡಿಸಬೇಕು. ನಂತರ ಸಾರಿಪುತ್ತರಿಗೆ ಹೀಗೆ ಹೇಳಿದರು:
ನಾನಿನ್ನು ಶಿಕ್ಷಣದಲ್ಲಿ ಅತಿ ಹೊಸಬನಾಗಿದ್ದೇನೆ. ಆಯುಷ್ಮಂತನೇ, ಈ ಧಮ್ಮವಿನಯಕ್ಕೆ ನಾನಿನ್ನು ತೀರ ಈಗಷ್ಟೇ ಕಾಲಿಟ್ಟಿದ್ದೇನೆ. ಹೀಗಾಗಿ ನಾನು ವಿವರವಾಗಿ ಧಮ್ಮವನ್ನು ಬೋಧಿಸಲಾರೆನು.
ಆಗ ಸಾರಿಪುತ್ರರು ಹೀಗೆ ನುಡಿದರು: ನನ್ನನ್ನು ಉಪತಿಸ್ಸನೆಂದು ಕರೆಯುವರು ಆಯುಷ್ಮಂತರೇ, ನಿಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿಯೇ ಎಷ್ಟೇ ಚಿಕ್ಕದಾಗಿ ನುಡಿಯುವಿರೋ ಪರವಾಗಿಲ್ಲ, ನುಡಿಯಿರಿ. ನಾನು ಅದನ್ನು ನೂರಾಗಿ ಅಥವಾ ಸಾವಿರ ಪಥದಲ್ಲಿ ವಿಶ್ಲೇಷಿಸಿ ಅದನ್ನು ಅಥರ್ೈಸಿಕೊಳ್ಳುವೆನು ಎಂದರು.
ಅಲ್ಪಪ್ರಮಾಣವೇ ಆಗಲಿ, ಚಿಕ್ಕದಾಗಿಯೇ ಇರಲಿ, ಅರ್ಥ ಮಾತ್ರವೇ ಆಗಿರಲಿ, ದಯವಿಟ್ಟು ತಿಳಿಸಿ. ನನ್ನ ಏಕೈಕ ಆಕಾಂಕ್ಷೆಯು ಅರ್ಥ ಅರಿಯುವುದೇ ಆಗಿದೆ. ಹಲವಾರು ಪದಗಳಿಂದ ಪ್ರಯೋಜನವೇನೂ ಇಲ್ಲ.
ಇದಕ್ಕೆ ಪ್ರತಿಯಾಗಿ ಅಸ್ಸಜಿಯು ಹೀಗೆ ನುಡಿಯುವರು:
ಯೇ ಧಮ್ಮಾ ಹೇತುಪಭವಾ,
ತೇಸಂ ಹೇತುಂ ತಥಾಗತೋ ಆಹ |
ತೇಸಂ ಭಯೋ ನಿರೋಧೋ
ಏವಂ ವಾದಿ ಮಹಾ ಸಮಣೋ ||
" ಕಾರಣಗಳಿಂದ ಉಂಟಾಗುವ ಎಲ್ಲಾ ಆಗುಹೋಗುಗಳ
ಕಾರಣವನ್ನು ತಥಾಗತರು ಹೇಳಿದ್ದಾರೆ ಮತ್ತು
ಹಾಗೆಯೇ ಅವುಗಳ ನಿರೋಧವನ್ನು ಸಹಾ ಹೇಳಿದ್ದಾರೆ,
ಇದೇ ಮಹಾ ಸಮಣರ ಧಮ್ಮವಾಗಿದೆ."
ಪ್ರಥಮ ಎರಡು ವಾಕ್ಯಗಳನ್ನು ಆಲಿಸಿದಂತಹ ಸಾರಿಪುತ್ರರಿಗೆ ತಕ್ಷಣವೇ ಕಶ್ಮಲರಹಿತ, ಕಲೆರಹಿತ ಸ್ಪಷ್ಟವಾದ ಧಮ್ಮದ ದರ್ಶನವಾಯಿತು. ಅಮರತ್ವದ ಪ್ರಥಮ ಮಿನುಗು ನೋಟವು ಸಾಕ್ಷಾತ್ಕಾರವಾಯಿತು. ನಿಬ್ಬಾಣ ಶ್ರೋತ ಪ್ರವೇಶಿಸಿ ಸೋತಾಪನ್ನರಾದರು. ನಂತರವೇ ಉಳಿದ ಎರಡು ವಾಕ್ಯವನ್ನು ಆಲಿಸಿದರು.
ತಕ್ಷಣವೇ ಅವರಿಗೆ ಅರಿವಾಯಿತು ಮುಕ್ತಿಯನ್ನು ಇಲ್ಲಿ ಮಾತ್ರವೇ ಪಡೆಯಬಹುದು ಎಂದು. ನಂತರ ಹೀಗೆ ನುಡಿದರು: ಸಾಕು ಭಂತೆ, ಇಷ್ಟೇ ಸಾಕು, ಧಮ್ಮವನ್ನು ಇನ್ನಷ್ಟು ವಿವರಿಸದಿರಿ, ಭಗವಾನರು ಎಲ್ಲಿ ನೆಲೆಸಿಹರು?
ಪರಿಬ್ಬಾಜಕನೇ, ವೇಲುವನದಲ್ಲಿ.
ಹಾಗಾದರೆ ಭಂತೆ, ತಾವು ಮುಂದೆ ಹೊರಡಿರಿ, ನಾನು ನನ್ನ ಮಿತ್ರನೊಂದಿಗೆ ಈ ಧಮ್ಮವನ್ನು ಹಂಚಬೇಕಾಗಿದೆ. ಆತನಿಗೆ ತಿಳಿಸಿ, ಜೊತೆಯಾಗಿಯೇ ಭಗವಾನರ ಸಮ್ಮುಖದಲ್ಲಿ ಬರುವೆವು ಎಂದು ನುಡಿದು ಅಸ್ಸಜಿಯವರ ಪಾದಕ್ಕೆ ಶಿರಬಾಗಿ ವಂದಿಸಿ, ಪರಿವ್ರಾಜಕರ ಉದ್ಯಾನಕ್ಕೆ ಹಿಂತಿರುಗಿದರು.
ಸಾರಿಪುತ್ತರು ಬರುವುದನ್ನು ಕಂಡ ಕೊಲಿತರು (ಮೊಗ್ಗಲಾನ) ಹೀಗೆ ಅರಿತರು: ಇಂದು ನನ್ನ ಮಿತ್ರನ ಬಾಹ್ಯಾಚರ್ಯೆಯು ಬದಲಾವಣೆಯಾಗಿದೆ. ಖಂಡಿತವಾಗಿಯು ಆತನು ಅಮರತ್ವವನ್ನು ಹುಡುಕಿದ್ದಾನೆ. ಬಂದಕೂಡಲೇ ವಿಚಾರಿಸಿದರು.
ಹೌದು ಮಿತ್ರನೇ, ಅಮರತ್ವವು ಹುಡುಕಿಯಾಗಿದೆ. ನಂತರ ಅವರು ಅಸ್ಸಜಿಯೊಂದಿಗೆ ನಡೆದ ಭೇಟಿಯ ವಿವರಗಳನ್ನು ನುಡಿದ ಬಳಿಕ ಆ ನಾಲ್ಕು ವಾಕ್ಯಗಳ ಗಾಥೆಯನ್ನು ಆಲಿಸಿದಂತಹ ಮೊಗ್ಗಲಾನರು ಸಹಾ ಸೋತಾಪತ್ತಿ ಫಲವನ್ನು ಪಡೆದರು.
ಆಯುಷ್ಮಂತನೇ, ಭಗವಾನರು ಈಗ ಎಲ್ಲಿರುವರು?
ಗುರುಗಳಾದ ಅಸ್ಸಜಿಯವರಂತೆ ಭಗವಾನರು ವೇಲುವನದಲ್ಲಿರುವರು.
ಹಾಗಾದರೆ ಸಾರಿಪುತ್ತ ನಡೆ, ಭಗವಾನರನ್ನು ಕಾಣೋಣ.
ಆದರೆ ಸಾರಿಪುತ್ತರು ಸದಾ ತಮ್ಮ ಗುರುಗಳನ್ನು ಗೌರವಿಸುವ ಕಾರಣದಿಂದಾಗಿ ಮೊಗ್ಗಲಾನರಿಗೆ ಹೀಗೆ ನುಡಿದರು: ನಾವು ಮೊದಲು ನಮ್ಮ ಗುರುಗಳಾದ ಪರಿಬ್ಬಾಜಕ ಸಂಜಯರಿಗೆ ಈ ಅಮರತ್ವದ ಕುರಿತು ತಿಳಿಸೋಣ. ಅವರಿಗೂ ಸತ್ಯದ ಅರಿವಾದರೆ ಒಳ್ಳೆಯದು. ಇಲ್ಲದಿದ್ದಲ್ಲಿ ನಮ್ಮ ಮೇಲಿನ ನಂಬಿಕೆಯಿಂದಲಾದರೂ ಭಗವಾನರನ್ನು ದಶರ್ಿಸುವರು. ಹಾಗು ಅಲ್ಲಿ ಭಗವಾನರ ಧಮ್ಮವನ್ನು ಆಲಿಸಿ ಅವರು ಮಾರ್ಗ ಹಾಗು ಫಲವನ್ನು ಪಡೆಯಬಹುದು.
1.6 ಸಂಜಯ ಶಾಸನಕ್ಕೆ ಬರಲು ನಿರಾಕರಣೆ:
ಹೀಗೆ ಇಬ್ಬರೂ ಸಂಜಯರಲ್ಲಿಗೆ ಹೋಗಿ ಈ ರೀತಿ ಹೇಳಿದರು:
ಗುರುಗಳೇ, ಲೋಕದಲ್ಲಿ ಬುದ್ಧಭಗವಾನರ ಉದಯವು ಆಗಿಹೋಗಿದೆ! ಅವರ ಧಮ್ಮವು ಸವಿವರವಾಗಿ ತಿಳಿಸಲ್ಪಟ್ಟಿದೆ. ಹಾಗು ಅವರ ಸಂಘವು ಸಮ್ಯಕ್ ಮಾರ್ಗದಲ್ಲಿ ಸಾಗುತ್ತಿದೆ. ನಾವು ಅವರನ್ನು ದಶರ್ಿಸೋಣ.
ನೀವು ಏನನ್ನು ಹೇಳುತ್ತಿರುವಿರಿ?! ಇಷ್ಟು ದೊಡ್ಡ ಬಣವನ್ನು ರಚಿಸಿ, ಈಗ ಬೇರೆಡೆಯಲ್ಲಿ ಶಿಷ್ಯವೃತ್ತಿ ಸ್ವೀಕರಿಸುವಿರಾ? ಇದರಿಂದಾಗಿ ನಿಮ್ಮ ಘನತೆಗೆ ಧಕ್ಕೆಯಾಗುವುದಿಲ್ಲವೆ? ನಿಮಗೆ ನನ್ನ ಸಮಾನ ಸ್ಥಾನವನ್ನು ನೀಡುತ್ತೇನೆ ಬನ್ನಿ, ನಮ್ಮ ಸಿದ್ಧಾಂತವನ್ನೇ ಎತ್ತಿಹಿಡಿಯೋಣ. ವಿಕ್ಷೇಪವಾದಿಗಳು ಯಾರ ಹಿಡಿತಕ್ಕೂ ಸಿಗಲಾರರು ಎಂದು ಸಾಧಿಸಿ ತೋರಿಸೋಣ.
ಇಲ್ಲ ಗುರುಗಳೇ, ಸತ್ಯದ ಮುಂದೆ ಮಿಥ್ಯವು ಕರಗಿಹೋಗುವುದು. ವಿಕ್ಷೇಪವಾದಿಗಳು ಜನರ ವಾದದಲ್ಲಿ ಹಿಡಿತಕ್ಕೆ ಸಿಗದಿದ್ದರೂ, ಮಾರನ ಹಿಡಿತಕ್ಕೆ ಸಿಲುಕುವರು. ಇಲ್ಲಿ ಘನತೆ ಗೌರವ ಸಿಕ್ಕರೂ ಸಹಾ ಜನ್ಮಗಳು ಪುನಃ ದೊರೆತು ದುಃಖಗಳಿಗೆ ಸಿಲುಕಬೇಕಾಗುತ್ತದೆ. ಇಲ್ಲಿನ ಸ್ಥಾನಕ್ಕೆ ಆಸೆ ಬಿದ್ದು ಅಮರತ್ವವನ್ನು ಕಳೆದುಕೊಳ್ಳಲಾರೆವು. ಅಲ್ಲಿನ ದಾಸನ ದಾಸನಷ್ಟು ಸೇವೆಗೂ ನಾವು ಬದ್ಧರಾಗುವೆವು. ಬುದ್ಧರ ಆಗಮನದ ಈ ವಿಶೇಷ ಅವಕಾಶ ನಾವು ಕಳೆದುಕೊಳ್ಳಲಾರೆವು. ಹೀಗಾಗಿ ನಾವು ಇನ್ನು ನಿಮ್ಮ ಶಿಷ್ಯರಾಗಿ ಉಳಿಯುವುದಿಲ್ಲ. ಆದರೆ ನಿಮ್ಮ ನೆನಪನ್ನು ಸಹಾ ನಾವು ಗೌರವದಿಂದ ಕಾಣುವೆವು. ಬನ್ನಿ ಗುರುಗಳೇ, ಕ್ಷಣಿಕವಾದ ಸ್ಥಾನಮಾನದ ಬಯಕೆ ತ್ಯಜಿಸಿ ಭಗವಾನರ ಹಿಂಬಾಲಕರಾಗೋಣ.
ಆಗ ಸಂಜಯ ಹೀಗೆ ಯೋಚಿಸಿದನು: ಇವರು ಇಷ್ಟನ್ನು ಅರಿತವರಾಗಿದ್ದರೆ, ನಾನು ಹೇಳುವುದನ್ನು ಇನ್ನು ಇವರು ಆಲಿಸಲಾರರು. ನಂತರ ಸಂಜಯ ಹೀಗೆ ಹೇಳಿದರು: ನೀವು ಹೋಗಿರಿ, ನಿಮಗೆ ಒಳ್ಳೆಯದಾಗಲಿ, ಆದರೆ ನಾನು ಬರಲಾರೆ.
ಏಕೆ ಗುರುಗಳೇ.
ನೋಡಿ, ನಾನು ಬಹಳಷ್ಟು ಮಂದಿಗೆ ಗುರುವಾಗಿದ್ದು, ಈಗ ಬೇರೆಯವರಿಗೆ ಶಿಷ್ಯನಾಗಲಾರೆ. ಹಾಗೆ ಆದರೆ ಸರೋವರವು ಬಿಂದಿಗೆ ಆದಂತೆ ಆಗುವುದು. ನಾನು ಮರಳಿ ಶಿಷ್ಯನಾಗಲಾರೆ, ಅದು ನನಗೆ ಅಸಾಧ್ಯ!
ಗುರುಗಳೇ, ಹಾಗೆ ಯೋಚಿಸದಿರಿ, ನೀವು ನಿಮ್ಮ ಶ್ರಮದಿಂದ ಅಲ್ಲಿಯೂ ಉನ್ನತ ಸ್ಥಾನ ಗಳಿಸಬಹುದು, ಎಲ್ಲಕ್ಕಿಂತ ಹೆಚ್ಚಾಗಿ ನಿಬ್ಬಾಣವು ದೊರೆಯುವುದು.
ನನ್ನನ್ನು ಬಲವಂತ ಮಾಡದಿರಿ, ನೀವು ಹೊರಡಿ, ನಾನು ಬರಲಾರೆ.
ಓಹ್ ಗುರುಗಳೇ, ಯಾವಾಗ ಭಗವಾನರ ಆಗಮನವಾಗುತ್ತದೋ, ಜನರು ಅವರನ್ನು ಗೌರವಿಸಲು ಗುಂಪು ಗುಂಪಾಗಿ ಧಾವಿಸುವರು. ಹೂಗಳಿಂದ ಸುಗಂಧಗಳಿಂದ ಅಲ್ಲಿಗೆ ಹೋಗುವರು. ಆಗ ನೀವು ಏನಾಗುವಿರಿ?
ಶಿಷ್ಯರೇ, ಈ ಜಗತ್ತಿನಲ್ಲಿ ಮೂರ್ಖರು ಹೆಚ್ಚಾಗಿ ಇರುವರೋ ಅಥವಾ ಜ್ಞಾನಿಗಳೋ?
ಗುರುಗಳೇ, ಈ ಲೋಕದಲ್ಲಿ ಮೂರ್ಖರೇ ಹೆಚ್ಚಾಗಿ ಇರುವರು ಹಾಗು ಜ್ಞಾನಿಗಳು ಅತಿಕಡಿಮೆ ಪ್ರಮಾಣದಲ್ಲಿದ್ದಾರೆ.
ಹಾಗಿದ್ದರೆ ಆಲಿಸಿ, ಜ್ಞಾನಿಗಳೆಲ್ಲರೂ ಸಮಣ ಗೋತಮರಲ್ಲಿಗೆ ಹೋದರೆ, ಉಳಿದ ಮೂರ್ಖರು ನನ್ನಲ್ಲಿಗೆ ಬರುವರು. ಹೀಗಾಗಿ ನೀವು ಹೊರಡಿ, ನಾನು ಬರಲಾರೆ.
ಗುರುಗಳೇ, ನೀವು ಕ್ಷುಲ್ಲುಕ ಗುರುಸ್ಥಾನಕ್ಕಾಗಿ, ಮಹೋನ್ನತ ಅಮರತ್ವವನ್ನು ಕಳೆದುಕೊಂಡಿರಿ. ನಿಮ್ಮ ತಪ್ಪು ನಿಮಗೆ ಪಶ್ಚಾತ್ತಾಪ ತರುವುದು ಎಂದು ನುಡಿದು ಅವರು ಅಲ್ಲಿಂದ ಹೊರಟರು. ಅವರನ್ನು ಹಿಂಬಾಲಿಸಿ ಅವರ ಹಿಂದಿನ ಸಾವಿರ ಹಿಂಬಾಲಕರಿಗೆ ಸಾರಿಪುತ್ತ ಹಾಗು ಮೊಗ್ಗಲಾನರನ್ನು ಹಿಂಬಾಲಿಸಿದರು. ಹಾಗೆಯೇ ಸಂಜಯನ 500 ಶಿಷ್ಯರು ಸಹಾ ಅವರನ್ನು ಹಿಂಬಾಲಿಸಿದರು. ಹೀಗಾಗಿ ಆ ಸಂಜಯ ಶಾಲೆಯು ಬರಿದಾಗಿರುವುದನ್ನು ಕಂಡು ಅತ್ಯಂತ ಒತ್ತಡಕ್ಕೆ ಗುರಿಯಾದರು. ಆಗ ಶಾರೀರಿಕ ಅಸ್ತವ್ಯಸ್ತವಾಗಿ ಆತನಿಗೆ ರಕ್ತ ವಾಂತಿಯಾಯಿತು. ಆದರೆ ಆತನ ಅದೃಷ್ಟವೆಂಬಂತೆ 250 ಸಂಜಯ ಶಿಷ್ಯರು ಮರಳಿ ಹಿಂತಿರುಗಿದರು.
ನಂತರ ಸಾರಿಪುತ್ತ ಮತ್ತು ಮೊಗ್ಗಲಾನರು ಬುದ್ಧರ ಬಳಿಗೆ ಹೋದರು. ಅವರಿನ್ನೂ ದೂರದಲ್ಲಿ ಬರುತ್ತಿರುವಾಗಲೇ ಅವರ ಕುರಿತು ಭಗವಾನರು ಹೀಗೆ ನುಡಿದರು. ಇಲ್ಲಿ ನೋಡಿ ಭಿಕ್ಖುಗಳೇ, ಅವರು ಬರುತ್ತಿರುವರಲ್ಲ ಅವರು ಸಮಾನ್ಯರಲ್ಲ, ಕೋಲಿತ ಹಾಗೂ ಉಪತಿಸ್ಸರೆಂಬ ಪರಸ್ಪರ ಮಿತ್ರರು ಅವರು ನನ್ನ ಅಗ್ರ ಶ್ರಾವಕರಾಗುವರು ಮಹಾ ಧನ್ಯತೆಯ ಪರಮ ಉತ್ಕೃಷ್ಟ ಜೋಡಿ ಇವರು ಎಂದು ನುಡಿದರು. ಆಗ ಅಲ್ಲಿಗೆ ಬಂದಂತಹ ಅವರು ಭಗವಾನರಿಗೆ ಭಕ್ತಿಪೂರ್ವಕವಾಗಿ ಹಣೆಯ ಬಳಿ ಕೈಜೋಡಿಸಿ, ಭಗವಾನರ ಪಾದಗಳಿಗೆ ವಂದಿಸಿದರು, ಹಾಗು ಹೀಗೆ ನುಡಿದರು, : ಭಗವಾನರು ನಮಗೆ ಪಬ್ಬಜ್ಜ ದೀಕ್ಷೆ ನೀಡುವಂತಾಗಲಿ ತಮ್ಮಿಂದಲೇ ನಮಗೆ ಪಬ್ಬಜ್ಜ ದೊರೆಯುವಂತಾಗಲೀ, ನಾವು ತಮ್ಮಲ್ಲಿ ಶರಣುಹೋಗಿರುವೆವು., ಆಗ ಭಗವಾನರು ಹೀಗೆ ನುಡಿದರು, ಬನ್ನಿ, ಭಿಕ್ಕೂಗಳೇ, ಧಮ್ಮವೂ ಸವಿವರವಾಗಿ ನುಡಿಯಲ್ಪಟ್ಟಿದೆ, ವಿಶುದ್ಧಿಯ ಜೀವನ ನಡೆಸುವವರಾಗಿ, ಹಾಗೇ ಜೀವಿಸಿ ದುಃಖಗಳ ಅಂತ್ಯವ ಮಾಡಿ ಎಂದು ಒಪ್ಪಿಗೆ ನೀಡಿದರು.
ಆಗ ಅವರ ಜೊತೆಯಲ್ಲಿ ಸಂಜಯನ ಅರ್ಧದಷ್ಟು ಶಿಷ್ಯರು ಜೊತೆ ಸೇರಿದರು. ನಂತರ ಬುದ್ಧರ ಬಳಿಗೆ ಬಂದು ಸಂಘದಲ್ಲಿ ಸೇರಿದರು. ಅಂದಿನಿಂದ ಅವರ ಹೆಸರು ಸಾರಿಪುತ್ತ ಮತ್ತು ಮೊಗ್ಗಲಾನ ಎಂದೇ ಖಾತ್ರಿಯಾಯಿತು.
ನಂತರ ಭಗವಾನರು ತಮ್ಮ ಬೋಧನೆಯನ್ನು ಮುಂದುವರಿಸಿದರು. ಪ್ರತಿಯೊಬ್ಬರ ಪ್ರಚನ್ನತೆಯನ್ನು ಅರಿತು, ಅವರ ಮನಸ್ಸಿಗೆ ಅನುಗುಣವಾಗಿ ಚಿತ್ತವು ಪರಿಪಕ್ವವಾಗಿ, ಬೋಧಿಯೆಡೆಗೆ ತಿರುಗಿಸಲ್ಪಟ್ಟು, ಚಿತ್ತಪರಿವರ್ತನೆಯಾಗಿ, ಅಜ್ಞಾನವು ಕಳಚಿಹೋಗಿ, ಸಾರಿಪುತ್ರ ಹಾಗು ಮೊಗ್ಗಲಾನರನ್ನು ಹೊರತುಪಡಿಸಿ ಉಳಿದ 250 ಸಹಚರರು ಅರಹತ್ವವನ್ನು ಪಡೆದರು. ಆ ಸಂದರ್ಭದಲ್ಲಿ ಸಾರಿಪುತ್ರ ಹಾಗು ಮೊಗ್ಗಲಾನರು ಉನ್ನತವಾದ ಲೋಕೋತ್ತರ ಮಗ್ಗವನ್ನಾಗಲಿ ಅಥವಾ ಫಲವನ್ನಾಗಲಿ ಪಡೆಯಲಿಲ್ಲ. ಅವರ ಅಗ್ರ ಶ್ರಾವಕಸಹಿತ ಅರಹಂತಸ್ಥಿತಿ ಪ್ರಾಪ್ತಿಗೆ ಇನ್ನೂ ಸ್ವಲ್ಪ ಕಾಲವಿತ್ತು. ಅಂದರೆ ಇನ್ನೂ ಸ್ವಲ್ಪ ಪಳಗಬೇಕಿತ್ತು. ಮೂರು ವಿಧದ ಶ್ರಾವಕ ಬೋಧಿ ಜ್ಞಾನಗಳಿವೆ. ಅವೆಂದರೆ ಶ್ರಾವಕ ಪಾರಮಿ ಜ್ಞಾನ, ಮಹಾ ಶ್ರಾವಕ ಪಾರಮಿ ಜ್ಞಾನ ಹಾಗೂ ಅಗ್ರ ಶ್ರಾವಕ ಪಾರಮಿ ಬೋಧಿ ಜ್ಞಾನ.. ಇಲ್ಲಿ ಅಗ್ರ ಶ್ರಾವಕರಾದ ಸಾರಿಪುತ್ತ ಹಾಗೂ ಮೊಗ್ಗಲಾನರವರು ಈ ಮೂರರಲ್ಲಿಯೂ ಜ್ಞಾನ ಪಡೆಯಬೇಕಿತ್ತು ಆದ ಕಾರಣ ಅವರಿಗೆ ಕೆಲದಿನಗಳ ನಂತರ ಅಂದರೆ ಮೊಗ್ಗಲಾನರವರಿಗೆ 7 ದಿನಗಳ ನಂತರ ಅರಹತ್ವ ಲಭಿಸಿದರೆ, ಸಾರಿಪುತ್ತರಿಗೆ 15 ದಿನಗಳ ನಂತರ ಅರಹತ್ವ ಲಭಿಸಿತು. ಸಂಘ ಪ್ರವೇಶಿಸಿದ ನಂತರ ಉಪತಿಸ್ಸರವರಿಗೆ ಸಾರಿಪುತ್ತ ಎಂದೇ ಎಲ್ಲರೂ ಕರೆಯಲಾರಂಭಿಸಿದರು. ಹಾಗು ಕೊಲಿತರವರಿಗೂ ಸಹಾ ಎಲ್ಲರೂ ಮಹಾಮೊಗ್ಗಲಾನ ಎಂದೇ ಕರೆಯಲಾರಂಭಿಸಿದರು.
ಮೊಗ್ಗಲಾನರವರು ಸಂಘ ಸೇರಿದ 7ನೇ ದಿನದಂದು ಅರಹಂತರಾದರು. ಸಾರಿಪುತ್ತರು 15ನೇ ದಿನಕ್ಕೆ ಅರಹಂತರಾದರು. ಬುದ್ಧ ಭಗವಾನರು ಸಹಾ ಇವರಿಗೆ ಅಗ್ರಶ್ರಾವಕರೆಂದು ಘೋಷಿಸಿದರು. ನಂತರ ಸಾರಿಪುತ್ತ ಮತ್ತು ಮೊಗ್ಗಲಾನರವರು ಸಂಜಯರು ಬುದ್ಧರ ಬಳಿಗೆ ಬರಲು ನಿರಾಕರಿಸಿದ್ದನ್ನು ತಿಳಿಸಿದರು. ಆಗ ಬುದ್ಧರು ಗಾಥೆಗಳನ್ನು ನುಡಿದರು.
ಅಸಾರವಾದುದರಲ್ಲಿ ಅವರು ಸಾರವನ್ನು ಕಲ್ಪಿಸುವರು, ಸಾರವಾದುದರಲ್ಲಿ ಅವರು ಅಸಾರವನ್ನು ಕಾಣುವರು. ಯಾರು ಇಂತಹ ತಪ್ಪು ಯೋಚನೆಗಳಲ್ಲಿ ಆನಂದಿಸುವರೋ ಅವರು ಎಂದಿಗೂ ಸಾರವನ್ನು ಸಾಕ್ಷಾತ್ಕರಿಸಲಾರರು (ಧ.ಪ.11)
ಯಾವುದು ಸಾರವೋ ಅದನ್ನು ಸಾರವಾಗಿಯೇ ಅವರು ಪರಿಗಣಿಸುವರು, ಯಾವುದು ಅಸಾರವೋ ಅವರು ಅಸಾರವಾಗಿಯೇ ಪರಿಗಣಿಸುತ್ತಾರೆ. ಈ ರೀತಿಯಲ್ಲಿ ಯೋಗ್ಯ ಚಿಂತನೆಯಿಂದಾಗಿ ಅವರು ಸಾರದ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ. (ಧ.ಪ.12)
- ಂ0ಂ

No comments:
Post a Comment