Saturday, November 5, 2022

4. ಮೊಗ್ಗಲಾನರ ಕರುಣಾ ಪ್ರಸಂಗಗಳು

 4. ಮೊಗ್ಗಲಾನರ ಕರುಣಾ ಪ್ರಸಂಗಗಳು 



4.1  ಬುದ್ಧಭಗವಾನರ ಹಾಗೂ ಮೊಗ್ಗಲಾನರ ಕರುಣೆ  

ಆಗ ಭಗವಾನರು ರಾಜಗೃಹದಲ್ಲಿ ವಿಹರಿಸುತ್ತಿದ್ದರು. ಆ ದಿನ ಮುಂಜಾನೆ ಭಗವಾನರು ಮಹಾಕರುಣಾ ಸಮಾಪತ್ತಿಯಲ್ಲಿದ್ದಾಗ ಆ ದಿನದಂದು ಯಾರಿಗೆ ಸಹಾಯ ಮಾಡಲಿ ಎಂದು ಜೀವಿಗಳನ್ನು ವೀಕ್ಷಿಸುತ್ತಿರುವಾಗ ಅವರಿಗೆ ಚಂಡಾಲಿಯು ಗೋಚರಿಸಿದಳು. ಏಕೆಂದರೆ ಆಕೆಯ ಅಯಸ್ಸು ಅತಿಅಲ್ಪವಾಗಿತ್ತು. ಹೀಗಾಗಿ ಭಗವಾನರು ಕನಿಷ್ಟ ಆಕೆಗೆ ಸುಗತಿಯನ್ನಾದರೂ ಸಿಗುವಂತೆ ಮಾಡಬೇಕೆಂದು ಅವರು ರಾಜಗೃಹಕ್ಕೆ ಆಹಾರ ಪಡೆಯಲು ಬಂದರು. 

ಆ ಸಮಯದಲ್ಲಿ ಚಂಡಾಲಿಯು ಕೋಲು ಊರಿಕೊಂಡು ಬರುತಿದ್ದಳು. ಆಕೆಗೆ ಭಗವಾನರು ಬರುತ್ತಿರುವುದು ಕಾಣಿಸಿತು. ಭಗವಾನರು ಹತ್ತಿರ ಬಂದಾಗ ಆಕೆಯು ನಿಂತುಬಿಟ್ಟಳು. ಭಗವಾನರು ಸಹಾ ನಿಂತರು. ಆಗ ಅಲ್ಲಿಯೆ ಇದ್ದಂತಹ ಮೊಗ್ಗಲಾನರಿಗೆ ಭಗವಾನರ ಕರುಣೆಯು ಹಾಗೂ ಆ ಚಂಡಾಲಿಯ ಆಯಸ್ಸು ತಕ್ಷಣ ತಿಳಿದುಹೋಯಿತು. ತಕ್ಷಣ ಅವರು ಚಂಡಾಲಿಗೆ ಹೀಗೆ ನುಡಿದರು. ; ಚಂಡಾಲಿ , ಭಗವಾನ್ ಗೋತಮ ಬುಧ್ಧರ ಕಾಲಿಗೆ ವಂದಿಸು.  ಅವರು ಪರಮ ಮಹೋನ್ನತರು, ನಿನ್ನ ಮೇಲೆ ದಯೆಯಿಟ್ಟು ನಿನ್ನ ಮುಂದೆ ನಿಂತಿದ್ದಾರೆ. ಅವರ ಮಹೋನ್ನತೆಯನ್ನು ಅರಿತು ನಿನ್ನ ಮನಸ್ಸನ್ನು ಅವರ ಮೇಲೆ ಶ್ರದ್ಧಾಯುತವಾಗಿ ತಿರುಗಿಸು. ಬೇಗ ತ್ವರೆಯಿಂದ ಕೈಜೋಡಿಸಿ ವಂದಿಸು.

ಆಗ ಆಕೆಯಲ್ಲಿ ಭಗವಾನರ ಬಗ್ಗೆ ಗೌರವ ಹಾಗೂ ಶ್ರಧ್ಧೆಯು ಉಕ್ಕಿ ಐದು ವಿಧಗಳಿಂದ ವಂದಿಸಿದಳು. ಆಕೆಯಲ್ಲಿ ಆನಂದವೂ ಪ್ರವಾಹದಂತೆ ಉಕ್ಕಿ ಹರಿಯಿತು. ಬುದ್ಧರ ಮೇಲೇ ಸ್ಥಿರವಾದ ಏಕಾಗ್ರತೆಯು ನೆಲೆಸಿತು. ಆಕೆಯ ಮನಸ್ಸು ಬುದ್ಧರ ವಿನಃ ಬೇರೆನೂ ಯೋಚಿಸುತ್ತಿರಲಿಲ್ಲ. 

ಆಗ ಭಗವಾನರು ಈಕೆಯ ಸುಗತಿಗೆ ಇಷ್ಟು ಸಾಕು ಎಂದು ಸ್ವತಃ ನುಡಿದುಕೊಂಡು ಅವರು ಅಲ್ಲಿಂದ ನಗರದ ಕಡೆಗೆ ಹೊರಟರು. ಆಕೆಗೆ ಧಮ್ಮವೂ ಅರ್ಥವಾಗದ ಕಾರಣದಿಂದ ಆಕೆಗೆ ಬೋಧಿಸಲಿಲ್ಲ. ನಂತರ ತಕ್ಷಣ ಹಸುವೊಂದು ಕರುವಿನ ಸಂಗಡ ಓಡುತ್ತಾ ಬಂದಿತು . ಅದು ಚಂಡಾಲಿಯನ್ನು ನೋಡಿದ ಕ್ಷಣವೇ ಹಾಗೇಯೇ ಮುನ್ನುಗ್ಗಿ ತನ್ನ ಕೊಂಬುಗಳಿಂದ ತಿವಿಯಿತು.. ಅದರೆ ಚಂಡಾಲಿಯು ಮಾತ್ರ ಕೇವಲ ಬುದ್ಧಭಗವಾನರನ್ನೆ ಸ್ಮರಿಸುತ್ತಿದ್ದಳು. ಕೈ ಜೋಡಿಸಿಕೊಂಡೆ ಆಕೆಯು ಪ್ರಾಣವನ್ನು ಬಿಟ್ಟಳು. ಫಲಿತಾಂಶವಾಗಿ ಆಕೆಯು ತಾವತಿಂಸ ದೇವಲೋಕದಲ್ಲಿ ಉಗಮಿಸಿದಳು.

  ಬುದ್ಧರ ವಂದನೆಯಲ್ಲಿಯೇ ಪ್ರಾಣ ಬಿಟ್ಟಳೆಂದು ಆಕೆಗೆ ಆಪಾರ ಖ್ಯಾತಿಯು ಸಿಕ್ಕಿತು. ನಂತರ ಮೊಗ್ಗಲಾನರು ಆಕೆಯನ್ನು ದೇವಲೋಕದಲ್ಲಿ ಕಂಡು ಮಾತನಾಡಿಸಿ ಆಕೆಯ ಉನ್ನತ ಸ್ಥಿತಿಯ ಕಾರಣ ಕೇಳಿದಾಗ ಆಕೆಯು ಬುದ್ಧರ ಪಾದ ವಂದನೆಯೇ ಸುಗತಿಗೇ ಕಾರಣವೆಂದಳು.

4.2 ಶ್ರೇಷ್ಟಿಪುತ್ರನಿಗೆ ಮೊಗ್ಗಲಾನರ ಕರುಣೆ

ಒಮ್ಮೆ ಭಗವಾನರು ರಾಜಗೃಹದ ವೇಲುವನದ ಕಲಂದಕ ನಿವಾಪದಲ್ಲಿದ್ದರು. ಅದೇ ಸಮಯದಲ್ಲಿ ಮಹಾಧನಾಸೆಟ್ಟಿ ಎಂಬ ಅತಿ ಶೀಮಂತನೊಬ್ಬನು ಅದೇ ನಗರದಲ್ಲಿದ್ದನು .ಆತನಿಗೆ ಒಬ್ಬ ಮಗನಿದ್ದನು. ಶ್ರೇಷ್ಟಿಯು ಮಗನ ಮೇಲಿನ ಅತಿ ಪ್ರೀತಿಯಿಂದ ಆತನಿಗೆ ಯಾವುದೇ ವಿಧ್ಯಾಭ್ಯಾಸ ಮಾಡಿಸಲಿಲ್ಲ. ನನ್ನ ಮಗನು ದಿನಕ್ಕೆ ಸಾವಿರ ರೂಪಾಯಿ ಖಚರ್ು ಮಾಡಿದರೂ ಸಹಾ ನಮ್ಮ ಸಂಪತ್ತು ಮುಗಿಯದೇ ಇರುವುದು.ಎಂದು ಭಾವಿಸಿದನು. ಮುಂದೇ ಆ ಪುತ್ರನು ವಯಸ್ಸಿಗೆ ಬಂದಾಗ ಆತನಿಗೆ ವಿವಾಹವನ್ನು ಮಾಡಿಸಿದನು. ಈ ವಧುವರರು ಸಂತೋಷವಾಗಿ, ವೈಭವಯುತವಾಗಿ ಜೀವನ ಸಾಗಿಸಿದರು. 

ಕಾಲಾನಂತರ ಮಹಾಧನಶ್ರೇಷ್ಟಿಯು ನಿಧನನಾದನು. ನಂತರ ಆತನ ಪುತ್ರನು ಇರುವ ಹಣವನ್ನೆಲ್ಲಾ ನೃತ್ಯ, ಗೀತೆಗಳು, ಸಂಗೀತ, ನಾಟಕ ಇತ್ಯಾದಿ ಚಟಗಳಿಗೆ ಬಳಸಿದನು. ಹೀಗಾಗಿ ಬಹು ಬೇಗ ಆತನು ಬಡವನಾದನು. ನಂತರ ಆತನು ಸಾಲ ಮಾಡಿ ಬಡ್ಡಿಗೆ ತೆಗೆದುಕೊಂಡು ಪುನಃ ಅದೇ ರೀತಿಯ ಜೀವನ ನಡೆಸಿದನು. ಹೀಗಾಗಿ ಪುನಃ ದರಿದ್ರನಾದನು ಈಗ ಆತನಿಗೆ ಸಾಲ ನೀಡಿದವರು, ಬಡ್ಡಿಗೆ ನೀಡಿದವರು ಹಣಕ್ಕೆ ಒತ್ತಾಯಿಸಿದರು. ಅತನ ಬಳಿಯಲ್ಲಿ ಹಣವಿಲ್ಲದಿರುವುದನ್ನು ಕಂಡು ಆತನ ಸ್ವತ್ತುಗಳನೆಲ್ಲಾ ಮಾರಿಸಿ ಹಣ ಪಡೆದರು. ನಂತರ ಆತನು ಇರುವ ಮನೆಯನ್ನು ಸಹಾ ಮಾರಿ ಸಾಲ ತೀರಿಸಿದನು.

ಯಾವ ಶ್ರೇಷ್ಟಿಯ ಮಗನು ರಥದಲ್ಲಿ ನಗರವನ್ನು ಸುತ್ತುತ್ತಿದ್ದನೊ ಆತನು ಅದೇ ನಗರದಲ್ಲಿ ಭಿಕ್ಷೆ ಬೇಡಲು ತೊಡಗಿದನು. ಆ ಸಮಯದಲ್ಲಿ ಆತನಿಗೆ ಕೆಲವು ಕಳ್ಳರು ಸ್ನೇಹಿತರಾದರು. ಅವರು ಆತನಿಗೆ ಪುಸಲಾಯಿಸಿ ಕಳ್ಳತನ ಮಾಡಲು ಪ್ರೇರಣೆ ಮಾಡಿದರು. ಒಮ್ಮೆ ಕಳ್ಳತನಕ್ಕೆ ಹೋಗಿದ್ದಾಗ ಅವರೆಲ್ಲಾ ಓಡಿಹೋದರು ಅದರೆ ಶ್ರೇಷ್ಟಿಯ ಮಗನು ಸಿಕ್ಕಿ ಹಾಕಿಕೊಂಡನು. ರಾಜನು ಸಹಾ ಆತನ ಶಿರಛ್ಛೆದಿಸಿ ಎಂದು ಆಜ್ಞೆ ನೀಡಿದನು.

ಭಟರು ಆತನನ್ನು ಕರೆದುಕೊಂಡು ಶಿರಚ್ಛೇಧನ ಮಾಡಲು ಕರೆದೊಯ್ಯುತ್ತಿದ್ದರು. ಆಗ ನಗರದ ಸುಂದರಿಯಾದ ಸುಲಾಸ  ಆತನನ್ನು ನೋಡಿದಳು. ಪೂರ್ವಜನ್ಮದ ಕಾರಣದಿಂದ ಆಕೆಯು ಸಹಾನುಭೂತಿಯಿಂದ ಭಟರಿಗೆ ಮನವೊಲಿಸಿ ಹಲವಾರು ಬಗೆಯ ತಿಂಡಿಗಳನ್ನು ಆ ಶ್ರೇಷ್ಟಿಯ ಪುತ್ರನಿಗೆ ನೀಡಿದಳು.

ಅದೇ ಸಮಯದಲ್ಲಿ ಅತ್ತ ಮಹಾಮೊಗ್ಗಲಾನರು ಹೋಗುತ್ತ್ತಿದ್ದರು.ತಕ್ಷಣ ಅವರಿಗೆ ಆತನ ಭೂತಕಾಲವೆಲ್ಲ ತಿಳಿದುಹೋಯಿತು. ಅವರು ಹೀಗೇ ಯೋಚಿಸಿದರು.ಈತನು ಜೀವನವೆಲ್ಲಾ ಯಾವುದೇ ಪುಣ್ಯವನ್ನು ಗಳಿಸಲಿಲ್ಲ ಈಗಲೂ ಇತನು ದಾನ ನೀಡದೇ ಹೋದರೆ ಇತನು ನರಕದಲ್ಲಿ ಜನಿಸುವನು ಹೀಗಾಗಿ ಈತನಿಗೇ ಸಹಾಯ ಮಾಡುವೆ ಎಂದು ನಿರ್ಧರಿಸಿ ಆ ಭಟರು ಆ ಆಹಾರವನ್ನೆಲ್ಲಾ ನೀಡುವ ಹೊತ್ತಿಗೆ ಸರಿಯಾಗಿ ಆತನ ಮುಂದೆ ಕಾಣಿಸಿಕೊಂಡರು. ಆಗ ಶ್ರೇಷ್ಟಿಯ ಮಗನು ಹೀಗೆ ಯೋಚಿಸಿದನು.;ಸಾಯುತ್ತಿರುವ ನನಗೆ ಈ ಆಹಾರಗಳಿಂದೇನು ? ಮುಂದಿನ ಗತಿಗೆ ಬುತ್ತಿ ಎಂಬಂತೆ ಈ ಭಿಕ್ಖುವಿಗೆ ದಾನ ನೀಡುವೆನು ಎಂದು ಆ ಆಹಾರ ಹಾಗೂ ಪಾನಿಯಗಳೆಲ್ಲವನ್ನು ಮೊಗ್ಗಲಾನರಿಗೇ ದಾನ ನೀಡಿದನು. ಮೊಗ್ಗಲಾನರು ಅದನ್ನು ಸ್ವೀಕರಿಸಿದರು ಹಾಗೂ ಸೇವಿಸಿದರು. ನಂತರ ಅಲ್ಲಿಂದ ಹೊರಟರು.

  ಆತನು ಮೊಗ್ಗಲಾನರಿಗೇ ನೀಡಿದ ದಾನದಿಂದಾಗಿ ಆತನು ದೇವ ಜನ್ಮತಾಳುವ ಬಹಳಷ್ಟು ಸಾಧ್ಯತೆಗಳು ಇದ್ದವು. ಅದರೆ ಆತನು ಶಿರಚ್ಚೇದನದ ವೇಳೆಯಲ್ಲಿ ಆತನ ಮನಸ್ಸು ಆತನಿಗೆ ದಾನ ನೀಡಿದ ಸುಲಾಸ ಮೇಲೆ ಹೋಯಿತು ಆಕೆಯ ಮೇಲೆ ಆತನಿಗೆ ಲೋಭವುಂಟಾಯಿತು. ಆಕೆಗೆ ಧನ್ಯವಾದ ಹೇಳಬೇಕು ಎಂದೆಲ್ಲಾ ಬಗೆಬಗೆಯಾಗಿ ಯೋಚಿಸುತ್ತಿದ್ದನು. ಆತನ ಶಿರಚ್ಚೇಧನವಾಯಿತು ಹಾಗೂ ಸಾವಿನ ವೇಳೆ ಆತನ ಮನಸ್ಸು ಲೋಭದಿಂದ ಮಲಿನವಾಗಿದ್ದರಿಂದ ಆತನು ಪ್ರೇತವಾದನು.

ಇತ್ತ ಸುಲಾಸಳು ವಾರ ಪೂತರ್ಿ ಶೋಕಪಟ್ಟಳು. ಅದರೆ ಜನರು ಆಕೆಗೆ ಹಾಗೂ ಆಕೆಯ ದಾನವನ್ನು ಪ್ರಶಂಸಿಸಿ, ಮೊಗ್ಗಲಾನರಿಗೆ ದಾನ ನೀಡಿದ್ದರಿಂದ ಆತನಿಗೆ ಸುಗತಿಯೇ ಸಿಕ್ಕಿದೆ ಎಂದು ಸಮಾದಾನಿಸಿದರು.

ಭಿಕ್ಖುಗಳು ಈ ವಿಷಯವನ್ನು ಭಗವಾನರಿಗೆ ತಿಳಿಸಿದರು. ಆಗ ಭಗವಾನರು ಈ ಗಾಥೆಗಳನ್ನು ನುಡಿದರು. :

ಅರಹಂತರು ಫಲವತ್ತಾದ ಭೂಮಿಯಿದ್ದಂತೆ

ದಾನಿಗಳು ರೈತರಂತೆ,

ಇಲ್ಲಿ ದಾನವೇ ಬೀಜಗಳಾಗಿವೆ,

ಇದರಿಂದ ಸುಫಲಗಳು ದೊರೆಯುವವು.

ಈ ಫಲವತ್ತಾದ ಭೂಮಿ ಹಾಗೂ ಬೀಜಗಳಿಂದ 

ಪೇತಗಳು ಆನಂದಿಸುವವು  ಹಾಗೂ 

ದಾನಿಯು ದಾನದಿಂದ ವೃದ್ಧಿಯಾಗುವನು

ಭೂಮಿಯಲ್ಲಿ ನೀಡುವ ಪುಣ್ಯಗಳಿಂದ 

ಪೇತಗಳು ಸಗ್ಗದಲ್ಲಿ ಗೌರವ ಪಡೆಯುವವು

ಆತನು ತನ್ನ ಸುಕಾರ್ಯಗಳಿಂದಾಗಿ ಸುಗತಿ ಪಡೆಯುವನು.

ಈ ಸುತ್ತದ ಅಂತ್ಯದಲ್ಲಿ 84000 ಜನರು ಸೋತಪನ್ನರಾದರು.

4.3 ತಾಯಿಗೆ ಸಹಾಯ

ಒಮ್ಮೆ ಮೊಗ್ಗಲಾನರು ತಮ್ಮ ದಿವ್ಯ ದೃಷ್ಟಿಯಿಂದ ದುರ್ಗತಿಯಲ್ಲಿರುವ ಜೀವಿಗಳನ್ನು ನೋಡುವಾಗ ಅವರಿಗೆ ತಮ್ಮ (ಪೂರ್ವಜನ್ಮದ) ತಾಯಿಯು ಪ್ರೇತಿಯಾಗಿರುವುದು ತಿಳಿಯಿತು. ತಕ್ಷಣ ಮೊಗ್ಗಲಾನರು ತಮ್ಮ ಅತಿಮಾಮನಸ ಶಕ್ತಿಯಿಂದ ದಿವ್ಯವಾದ ಆಹಾರವನ್ನು ಸೃಷ್ಟಿಸಿಕೊಂಡು ತಮ್ಮ ತಾಯಿಗೆ ನೀಡಿದರು. ಅದರೆ ಅದು ಅವರ ತಾಯಿಯ ಕೈಗೆ ಹೋದ ಕ್ಷಣದಲ್ಲಿ ಅದು ಇದ್ದಿಲಾಯಿತು ಅದು ಸೇವಿಸುವ ಹಾಗಿರಲಿಲ್ಲ. ಇದರಿಂದ ಮೊಗ್ಗಲಾನರವರಿಗೆ ಅನುಕಂಪ ಉಂಟಾಯಿತು. ಪರರ ವಿಷಯಗಳೆಲ್ಲಾ ತಿಳಿಯುವ ಅವರು ತಾಯಿಯ ಬಗ್ಗೆ ತಿಳಿಯಲಾಗಲಿಲ್ಲ.ತಕ್ಷಣ ಅವರು ಭಗವಾನರ ಬಳಿಗೆ ಬಂದು ವಿಷಯ ತಿಳಿಸಿ ಕಾರಣ ಕೇಳಿದರು.

ಆಗ ಭಗವಾನರು ಆಕೆಯ ಸ್ಥಿತಿಗೆ ಕಾರಣವನ್ನು ಹೇಳಿದರು ಆಕೆಯು ಹಿಂದಿನ ಜನ್ಮವೊಂದರಲ್ಲಿ ಹಿಂದಿನ ಬುದ್ಧರಿಗೆ ಹಾಗೂ ಸಂಘಕ್ಕೆ ಅಪನಿಂದೆ ಮಾಡಿದ್ದಳು ಹಾಗೂ ಅತಿ ಕೋಪದ ವ್ಯಕ್ತಿತ್ವದವಳಾಗಿದ್ದಳು. ಹಾಗೂ ಈ ವಿಷಯವು ಮೊಗ್ಗಲಾನರಿಗೆ ತಿಳಿಯದಿರುವಿಕೆ ಕಾರಣವೆನೆಂದರೆ ತಾಯಿಯ ಮೇಲೆ ಇರುವ ಅತಿಭಕ್ತಿಯು ಅರಿಯಲು ಅಡ್ಡಿಯಾಯಿತು ಎಂದರು. ಆಗ ಮೊಗ್ಗಲಾನರು ಪರಿಹಾರವನ್ನು ಕೇಳಿದರು. ಆಗ ಭಗವಾನರು ಅರಹಂತ ಭಿಕ್ಖುಗಳಿಗೆ ಆಹಾರ ದಾನದ ಫಲವನ್ನು ಹಂಚುವುದೇ ಪರಿಹಾರವೆಂದರು. ನಂತರ ಭಗವಾನರ ಸಹಿತ ಭಿಕ್ಖು ಸಂಘಕ್ಕೆ ದಾನ ನೀಡಿದಾಗ ಅವರ ತಾಯಿಯು ಆ ಪೇತಿ ಜನ್ಮದಿಂದ ಮುಕ್ತಳಾದಳು.

4.4 ಅಬಲೆಗೆ ಸಹಾಯ 

ಒಮ್ಮೆ ಮೊಗ್ಗಲಾನರು ಉಧ್ಯಾನವನದಲ್ಲಿ ಹೋಗುತ್ತಿದ್ದರು .ಆಗ ಸುಂದರಳಾಗಿದ್ದ ಯುವತಿಯು ತನ್ನ ಸೌಂದರ್ಯದಿಂದ ಹಾಗೂ ನಗೆಯಿಂದ ಅವರಿಗೆ ಆಕಷರ್ಿಸಲು ಯತ್ನಿಸಿದಳು. ಆಗ ಮೊಗ್ಗಲಾನರಿಗೆ ಆಕೆಯ ಉದ್ಧೇಶ ತಿಳಿಯಿತು. ನಂತರ ಅವರು ಹೀಗೆ ನುಡಿದರು :ಬಡಪಾಯಿ ಹೆಣ್ಣೆ ನಿನ್ನ ಶರೀರವು ಈಗಾಗಲೇ ಅಪಾರ ಕೊಳಕುಗಳಿಂದ ಕೂಡಿದೆ.ಈಗ ನೀನು ಅನ್ಯ ಮಾತಾವಲಂಬಿಗಳ ದುಬರ್ೋದನೆಗಳಿಂದಾಗಿ ಹಾಗೂ ಸ್ವಲ್ಪ ಹಣಕ್ಕಾಗಿ ನಿನ್ನ ಮನಃಸಾಕ್ಷಿಗೆ ವಿರುದ್ಧವಾಗಿ ಕೆಟ್ಟ ಉದ್ದೇಶಗಳಿಂದ ನನ್ನ ಬಳಿಗೆ ಬರುತ್ತಿರುವೆ. ಎಂದರು.

ಅವರ ಮತುಗಳನ್ನು ಕೇಳಿ ಆಕೆ ಆಘಾತ ಹೊಂದಿದಳು. ಹಾಗೂ ಲಜ್ಜಿತಳಾದಳು. ಹಾಗೂ ಪಶ್ಚಾತಾಪ ಪಟ್ಟಳು. ಹಾಗೂ ಕ್ಷಮೆಯಾಚಿಸಿದಳು. ನಂತರ ತನ್ನ ಕಥೆಯನ್ನು ಹೀಗೆ ಹೇಳಿದಳು. ಆಕೆ ತನ್ನ ಹದಿನಾರನೇ ವಯಸ್ಸಿಗೆ ವಿವಾಹವಾದಳು ಹಾಗು ಮಗಳನ್ನು ಪಡೆದಳು. ಕೆಲ ಕಾಲದ ನಂತರ ಆಕೆಯ ತಂದೆ ತೀರಿಹೋದರು. ಅದರೆ ಆಕೆಯ ತಾಯಿಯು ಈಕೆಯ ಪತಿಯೊಡನೆ ಅನೈತಿಕ ಸಂಬಂಧ ಹೊಂದಿದಳು. ಇದರಿಂದ ಅಪಾರ ಕೋಪ ಉಂಟಾಗಿ ಮನೆ ಬಿಟ್ಟು ಹೊರಟು ಇನ್ನೊಬ್ಬ ವ್ಯಕ್ತಿಯನ್ನು ವಿವಾಹವಾದಳು. ಅದರೆ ಆಕೆಯ ಎರಡನೆಯ ಪತಿಯು ಇನ್ನೊಬ್ಬ ಹೆಣ್ಣನ್ನು ವಿವಾಹವಾಗಿ ವಧುವನ್ನು ಮನೆಗೆ ಕರೆತಂದನು ಅಕೆಯು ಸ್ವತಃ ಆಕೆಯ ಮಗಳೆಂದು ನಂತರ ಆಕೆಗೆ ತಿಳಿಯಿತು.. ಇದರಿಂದಾಗಿ ಆಕೆಯು ಅಪಾರ ಲಜ್ಜೆ ಹಾಗೂ ಆಘಾತ ಹೊಂದಿದಳು. ನಂತರ ಆಕೆಯು ಆ ಮನೆಯನ್ನು ಬಿಟ್ಟು ವೇಶ್ಯೆಯಾಗಿ,  ಹಣಕ್ಕೆ ಏನನ್ನೂ ಬೇಕಾದರೂ ಮಾಡುವವಳಾದಳು.

ಆಕೆಯ ಶೋಚನೀಯ ಕಥೆ ಕೇಳಿದ ಮೊಗ್ಗಲಾನರು ಕರುಣೆಯಿಂದ ಕೂಡಿದರು ಹೊರತು ಆಕೆಯನ್ನು ಕಂಡು ಅಸಹ್ಯವಾಗಲಿ ಅಥವಾ ಕೀಳಾಗಿ ಕಾಣಲಿಲ್ಲ.ಆಕೆಯಲ್ಲಿನ ಕೆಲವು ಸಧ್ಗುಣಗಳನ್ನೇ ಕಂಡರು. ಆಗ ಅವರು ಹೀಗೆಂದರು : ತಂಗಿಯೇ ನಿನ್ನ ಅತೀತಕಾಲವು ಭಯಾನಕವಾಗಿದೆ. ಅದರೆ ಇದಕ್ಕಾಗಿ ನೀನೂ ಶೋಕವಾಗಲಿ ಅಥವಾ ದುಃಖತಾಳುವುದಾಗಲಿ ಮಾಡಕೂಡದು. ಈ ಹಿಂದೆ ನೀನೂ ಎಷ್ಟೇ ಪಾಪಿಯಾಗಿದ್ದರೂ ಸಹಾ ನಿನಗೆ ಸ್ವರ್ಣಮಯವಾದ ಭವಿಷ್ಯವಿದೆ. ಹಿಂದಿನದಕ್ಕೆ ಪಶ್ಚಾತ್ತಾಪ ಪಡು , ಅದರೆ ಶೋಕವಲ್ಲ. ಬದಲಾಗಿ ಅಂತಹ ಕೆಲಸಗಳನ್ನು ನಿಲ್ಲಿಸು. ಧಮ್ಮವನ್ನು ಪಾಲಿಸು ಆಗಲೇ ನೀನು ಕ್ಷೇಮವಾಗಿರುವೆ. ಬಾ ನಾನು ನಿನಗೆ ಬುದ್ಧರ ಬಳಿಗೆ ಕರೆದೂಯ್ಯುವೆ. ಎಂದು ಆಕೆಯನ್ನು ಪರಿವರ್ತನೆಗೊಳಿಸಿದರು. ಬುದ್ಧರೆಡೆಗೆ ಹಾಗೂ ಧಮ್ಮದೆಡೆಗೆ ಕರೆತಂದರು.

4.5 ಭಾರವಾದ ಕಮ್ಮ ವಿಪಾಕದ ಮುಂದೆ ಇದ್ಧಿಶಕ್ತಿಗಳು ದುರ್ಬಲ

   ಮೊದಲು ಮೊಗ್ಗಲಾನರಿಗೆ ಇದ್ಧಿಶಕ್ತಿಯಿಂದಾಗಿ ಏನನ್ನು ಬೇಕಾದರೂ ಸಾಧಿಸಬಲ್ಲೆ ಎಂಬ ವಿಶ್ವಾಸವಿತ್ತು ಅದರೆ ನಂತರ ಇದ್ಧಿಶಕ್ತಿಗಳ ಪರಿಮಿತಿಯು ತಿಳಿಯಿತು .ಇದ್ಧಿಶಕ್ತಿಯಿಂದ ಮನಪರಿವರ್ತನೆಗೆ ನೇರವಾಗಿ ಸಹಾಯ ಮಾಡಲಾರೆವು ಅದರೆ ಪರೊಕ್ಷವಾಗಿ ಸಹಾಯ ಆಗುತ್ತದೆ. . ಕೇವಲ ಹಾರೈಕೆಯಿಂದಲೇ ನಾವೂ ಯಾರಿಗೂ ನಿಬ್ಬಾಣ ನೀಡಲಾರೆವು.. ಅವರವರ ನಿಬ್ಬಾಣ ಅವರೇ ಗಳಿಸಬೇಕು. ನಿಬ್ಬಾಣವೆಂದರೆ ಯಾವುದನ್ನೂ ಅಂಟಿಕೊಂಡಿರದ ಸ್ಥಿತಿ . ಯಾವುದನ್ನು ಹಿಡಿದುಕೊಳ್ಳದೆ ಎಲ್ಲವನ್ನು ಬಿಟ್ಟಿರುವ ಸ್ಥಿತಿ. ಅದನ್ನು ಹಾರೈಕೆ ಅಥವಾ ಇದ್ಧಿಶಕ್ತಿಯಿಂದ ನೀಡಲಾಗದು . ಅದೇ ರೀತಿ ಅತಿ ಭಾರವಾದ ಕಮ್ಮ ವಿಪಾಕವನ್ನು ನಾವು ತಡೆಯಲಾರೆವು ಎಂದು ಕಂಡುಕೊಳ್ಳುತ್ತಾರೆ. ಉದಾಹರಣೆಗೆ ವಿಢೂಡಭನು ಶಾಕ್ಯರನ್ನು ಕೊಲ್ಲಲು ಭಾರಿ ಸೈನ್ಯದ ಸಮೇತ ಬರುತ್ತಾನೆ. ಮೂರು ಬಾರಿ ಭಗವಾನರು ಸಹಾ ತಮ್ಮ ಕೌಶಲ್ಯದಿಂದ ಅದನ್ನು ತಪ್ಪಿಸಿದರು. ಅದರೆ ನಾಲ್ಕನೆಯ ಬಾರಿ ವಿಢೂಡಭನು ಈ ಬಾರಿ ಭಗವಾನರು ಅಡ್ಡ ಬಂದರು ಸರಿ ಶಾಕ್ಯರಿಗೆ ಮುಗಿಸುತ್ತೇನೆ ಎಂಬ ದೋರಣೆ ತಾಳಿ ಬರುತ್ತಾನೆ. ಭಗವಾನರಿಗೇ ಶಾಕ್ಯರ ಹಿಂದಿನ ಜನ್ಮದ ಕಮ್ಮವಿಪಾಕ ಫಲನೀಡುವ ಸಮಯ ಹಾಗೂ ಈ ಸಾಮೂಹಿಕ ಹತ್ಯೆಯ ನಂತರ ಅವರ ಸುಗತಿಗಳನ್ನು ಕಂಡು  4ನೇಯ ಬಾರಿ ಭಗವಾನರು ಹೋಗಲಿಲ್ಲ. ಅದರೆ ಮೊಗ್ಗಲಾನರು ಮಾತ್ರ ವಿಢೂಡಭನ ಸೈನ್ಯ ಬರುವ ಮುಂಚೆಯೇ ಕಪಿಲವಸ್ತುವಿಗೆ ಹೋಗಿ  500 ಶಾಕ್ಯರನ್ನು ಹಿಡಿದು ತಮ್ಮ ಪಿಂಡಪಾತ್ರೆಯಲ್ಲಿ ತುಂಬಿಸಿ. ಬೇರೆ ರಾಜ್ಯದಲ್ಲಿ ಪಿಂಡಪಾತ್ರೆಯನ್ನು ತೆಗೆಯುತ್ತಾರೆ ಅಲ್ಲಿ ಶಾಕ್ಯರ ಬದಲು ರಕ್ತವನ್ನು ನೋಡುತ್ತಾರೆ. ಆಗ ಅವರಿಗೆ ಕಮ್ಮನಿಯಮವು ಇದ್ಧಿಶಕ್ತಿಗಿಂತ ಬಲಿಷ್ಟವೆಂದು ಅರಿಯುತ್ತಾರೆ. ಮುಂದೆ ಮೊಗ್ಗಲಾನರ ಮೇಲು ಅಂತಿಮವಾಗಿ ಆಕ್ರಮಣವಾದಗಲೂ ಅವರಿಗೆ ಈ ವಿಷಯವು ಸ್ಪಷ್ಟವಾಗಿ ತಿಳಿಯುವುದು. ಆ ವಿವರವು ಮುಂದೆ ಸಿಗುವುದು.


- ಂ0ಂ  

No comments:

Post a Comment

12. ಪರಿನಿಬ್ಬಾಣದ ನಂತರ

 12. ಪರಿನಿಬ್ಬಾಣದ ನಂತರ  12.1 ಉಕ್ಕಚೆಲಾ ಸುತ್ತ: ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರ...